ವೆಲ್ವೆಟ್ ಗಿಡ
	ಅಮರಾಂತೇಸೀ ಕುಟುಂಬದ ಸಿಲೋಸಿಯಾಕ್ರಿಸ್ಟೆಟಾ ಎಂಬ ಸಸ್ಯ. ಅಲಂಕಾರಕ್ಕಾಗಿ ಮನೆಯ ಕೈತೋಟ ಮತ್ತು ಉದ್ಯಾನವನ ಗಳಲ್ಲಿ ಬೆಳೆಸಲಾಗುತ್ತದೆ. ಇದಕ್ಕೆ ಸಂಸ್ಕೃತದಲ್ಲಿ ಮಯಾರಷಿಕ ಎಂದು ಹೆಸರು. ಸಮತಟ್ಟಾದ ಪ್ರದೇಶಗಳಲ್ಲಿ ಮತ್ತು ಸುಮಾರು 1500 ಮೀ ಎತ್ತರದವರೆಗೆ ಹಿಮಾಲಯ ಪ್ರದೇಶದಲ್ಲಿ ಬೆಳೆಯುತ್ತದೆ. ಇದರಲ್ಲಿ ವಿವಿಧ ಆಕಾರಗಳ, ವಿಚಿತ್ರ ರೂಪಗಳ ಹೂಗೊಂಚಲುಗಳಿರುವುವು. ಒಂದೊಂದು ಗೊಂಚಲಿನಲ್ಲಿಯೂ ಅಸಂಖ್ಯ ಹೂಗಳುಂಟು.

	ಸಾಮಾನ್ಯವಾಗಿ 1-2 ಮೀ ಎತ್ತರಕ್ಕೆ ಬೆಳೆಯುವ ಈ ಸಸ್ಯದಲ್ಲಿ ಪ್ರತಿ ಗೆಣ್ಣಿನಲ್ಲಿಯೂ ಒಂದು ಎಲೆ ಇದೆ. ಕಾಂಡದ ತುದಿಯಲ್ಲಿ ಹೂಗೊಂಚಲಿದೆ. ಹೂ ದಳಗಳು ಒಂದು ಸುತ್ತಿನಲ್ಲಿರುತ್ತವೆ. ಮೊದಲ ಸುತ್ತಿನ ಕೇಸರಗಳು 5 ಹಾಗೂ ಎರಡನೆಯ ಸುತ್ತಿನ ಬಂಜೆ ಕೇಸರಗಳು ಒಟ್ಟಿಗೆ ಸೇರಿ ಬಟ್ಟಲಿನಂತಾಗುತ್ತವೆ. ಅಂಡಾಶಯ 2 ಶಲಾಕಾಶಯ ಗಳಿಂದಾಗಿರುವುದು.  ಹೂಗಳು ಫಲಿತಗೊಂಡ ಅನಂತರ ಯುಟ್ರಿಕಲ್ (ಹಣ್ಣು) ಬಿಡುತ್ತವೆ. ಈ ಗಿಡದ ಎಲೆಗಳನ್ನು ಆಹಾರವಾಗಿ ಬಳಸುತ್ತಾರೆ. ಕಾಂಡದಲ್ಲಿರುವ ರಬ್ಬರಿನಂಥ ನಾರುಗಳಿಂದ ಹಗ್ಗಗಳನ್ನು ತಯಾರಿಸುತ್ತಾರೆ. ಬೀಜಗಳನ್ನು ಮೂತ್ರರೋಗ ಮತ್ತು ಕಫಶಾಮಕವಾಗಿಯೂ ಬಳಸಲಾಗುತ್ತದೆ.	
												(ಟಿ.ಎಮ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ